ವೆನಿಸ್
	ಇಟಲಿಯ ಈಶಾನ್ಯದಲ್ಲಿರುವ ಒಂದು ಪ್ರಾಂತ ಹಾಗೂ ನಗರ. ವೆನಿಸಿಯ ಎಂದೂ ಕರೆಯುವ ಇದರ ಪೂರ್ವಕ್ಕೆ ಏಡ್ರಿಯಾಟಿಕ್ ಸಮುದ್ರ, ಪಶ್ಚಿಮಕ್ಕೆ ಮಿಲಾನ್ ಪ್ರಾಂತ, ದಕ್ಷಿಣಕ್ಕೆ ಬೊಲೊಗ್ನ ಪ್ರಾಂತ ಮತ್ತು ಉತ್ತರಕ್ಕೆ ಟ್ರೆಂಟೊ ಪ್ರಾಂತವಿದೆ. ವಿಸ್ತಾರ 18,368 ಚ.ಕಿಮೀ. ಜನಸಂಖ್ಯೆ 43,90,797. ಆಡಳಿತ ಕೇಂದ್ರ ನಗರ ವೆನಿಸ್. 

	ಇದು ಸು. 452ರಲ್ಲಿ ಸ್ಥಾಪಿಸಿದ ಇಟಲಿಯ ಪ್ರಾಚೀನ ಸುಂದರನಗರ. ಏಡ್ರಿಯಾಟಿಕ್ ಸಮುದ್ರದಿಂದ 4 ಕಿಮಿ ದೂರದಲ್ಲಿದೆ. ಕಾಲುವೆಗಳ ನಗರವೆಂಬ ಖ್ಯಾತಿಯೂ ಇರುವ ಇದು ಏಡ್ರಿಯಾಟಿಕ್ ಸಮುದ್ರದ ಪಶ್ಚಿಮ ತೀರದ ಒಂದು ಸುಂದರ ಬಂದರು. ಜನಸಂಖ್ಯೆ 3,09,422.  ಈ ನಗರ ಇಟಲಿಯ ಮುಖ್ಯ ಭೂಭಾಗವೂ ಸೇರಿದಂತೆ ಏಡ್ರಿಯಾಟಿಕ್ ಸಮುದ್ರದ ಸು. 120 ದ್ವೀಪಗಳಲ್ಲಿ ಹರಡಿ ಬೆಳೆದಿದೆ. ದೋಣಿಯನ್ನು ಬಳಸಿದ ಜಲಸಾರಿಗೆ ಇಲ್ಲಿನ ಪ್ರಮುಖ ಸಾರಿಗೆ ವ್ಯವಸ್ಥೆ. ಈ ದೃಷ್ಟಿಯಿಂದ ಇದು ಜಗತ್ತಿನ ಒಂದು ವಿಚಿತ್ರ ಮತ್ತು ವೈಶಿಷ್ಟ್ಯ ನಗರವೆಂದು ಪ್ರಸಿದ್ಧ. ಈ ನಗರವನ್ನು ಇಟಲಿಯ ನಗರಾಡಳಿತ ಕಮ್ಯೂನ್ ಎಂದು ಗುರುತಿಸಿದ್ದು ಇದರ ಸಮೀಪವಿರುವ ಕೈಗಾರಿಕಾ ಕೇಂದ್ರಗಳಾದ ಮರ್ಗೆರ ಮತ್ತು ಮೆಟ್ರಿ ಇವು ಸಹ ಈ ಕಮ್ಯೂನ್ ಒಳಗೇ ಸೇರಿಹೋಗಿವೆ. ಇಟಾಲಿಯನ್ನರು ಈ ನಗರವನ್ನು ವೆನಿಜಿóಯ ಎಂದು ಕರೆಯುವರು. ಇಲ್ಲಿನ ಬಹು ಅಮೂಲ್ಯ ಕಲೆಗಾರಿಕೆ, ಕಟ್ಟಡಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಈ ನಗರವಿರುವ ಭೌಗೋಳಿಕ ಪರಿಸರ ಮತ್ತು ನೆಲೆಯಿಂದಾಗಿ ಸು.800 ರಲ್ಲೆ ಇದೊಂದು ಪ್ರಸಿದ್ಧ ವ್ಯಾಪಾರ ವಾಣಿಜ್ಯ ಕೇಂದ್ರವಾಗಿದ್ದು ಇದರ ಉಚ್ಛ್ರಾಯ ಕಾಲದಲ್ಲಿ ಈ ನಗರವನ್ನು ಏಡ್ರಿಯಾಟಿಕ್‍ನ ರಾಣಿ ಎಂದು ಕರೆಯುತ್ತಿದ್ದರು. ಇಂದೂ ಇದೊಂದು ಸಾಂಸ್ಕøತಿಕ ಕೇಂದ್ರವಾಗಿ ಖ್ಯಾತವಾಗಿದೆ. ಈ ನಗರವನ್ನು ಇಟಲಿಯ ಮುಖ್ಯಭೂಭಾಗದಿಂದ ಒಂದು ಕಾಲುವೆಯಂತಿರುವ ಸಮುದ್ರದ ಉಪ್ಪುನೀರು ಬೇರ್ಪಡಿಸಿದೆ. ಮಧ್ಯೆ ಕೆಲವು ಕಡೆ ಸಮುದ್ರದ ಮರಳು ದಿಬ್ಬಗಳಿವೆ. ಸು. 400 ಸೇತುವೆಗಳು ವೆನಿಸ್ ನಗರದೊಡನೆ ಸಂಪರ್ಕ ಕಲ್ಪಿಸಿವೆ. 150 ಕ್ಕೂ ಮಿಗಿಲಾದ ಕಾಲುವೆಗಳಿದ್ದು ಇಲ್ಲಿ ಗೊಂಡಲಾಸ್ ಎನ್ನುವ ದೋಣಿಗಳು ಪ್ರಯಾಣಿಕರನ್ನು ಸಾಗಿಸುತ್ತವೆ. ಇತ್ತೀಚೆಗೆ ಯಂತ್ರದೋಣಿಗಳ ಬಳಕೆ ಹೆಚ್ಚುತ್ತಿದೆ. ನಗರದ ಕಟ್ಟಡಗಳ ಮಧ್ಯದ ಕಿರು ಜಾಗವನ್ನು ಕಲ್ಲಿ ಎಂದು ಕರೆಯುತ್ತಾರೆ. ವೆನಿಸ್‍ನಗರದಲ್ಲಿ ಪ್ರಸಿದ್ಧ ಸಂತ ಮಾರ್ಕ್ ನ ಚರ್ಚಿದೆ. ಸಂತ ಮಾರ್ಕ್‍ಚೌಕ ವೆನಿಸ್ ನಗರದ ಮುಖ್ಯ ವಾಣಿಜ್ಯ ಕೇಂದ್ರ. ಮುಖ್ಯ ಕಾಲುವೆಯ ಅಕ್ಕಪಕ್ಕ ಸು.1100 ಮತ್ತು 1800ರಲ್ಲಿ ರಚನೆಗೊಂಡ ಅಮೃತಶಿಲೆಯ ಮತ್ತು ಕಲ್ಲಿನ ಅರಮನೆಗಳಿವೆ. ಪ್ರಪ್ರಥಮದಲ್ಲಿ ವೆನಿಸ್ ಆಳಿದ ಡೊಗೆದೊರೆಗಳಿಗೆ ಕಟ್ಟಿದ ಡೊಗೆ ಅರಮನೆಯಿದೆ. ಇಲ್ಲಿ ಪ್ರಾಚೀನ ವೆನಿಸ್ ವಿಶ್ವವಿದ್ಯಾಲಯವಿದೆ. ಕೆಲವು ಸುಂದರ ಉದ್ಯಾನವನಗಳೂ ಸಮುದ್ರ ತೀರವೂ ಪ್ರವಾಸಿಗರ ಕಣ್ಮನ ತಣಿಸುತ್ತವೆ. ವರ್ಷಕ್ಕೆ 3 ಮಿಲಿಯನ್ ಪ್ರವಾಸಿಗರು ಈ ನಗರಕ್ಕೆ ಭೇಟಿ ಕೊಡುವರೆಂದು ತಿಳಿದುಬಂದಿದೆ. ಇಲ್ಲಿ ಹೆಚ್ಚು ಕೆಥೊಲಿಕ್ ಧರ್ಮೀಯರಿದ್ದಾರೆ. ಇಲ್ಲಿನ ಆರ್ಥಿಕ ವ್ಯವಸ್ಥೆ ಪ್ರಧಾನವಾಗಿ ಪ್ರವಾಸೋದ್ಯಮವನ್ನವಲಂಬಿಸಿದೆ. ವಿವಿಧ ಕುಶಲ ವಸ್ತುಗಳ ವ್ಯಾಪಾರ ವಹಿವಾಟು ನಡೆಯುವುದುಂಟು. ಮರ್ಗೆರ ಮತ್ತು ಮೆಟ್ರಿ ಎಂಬ ಕೈಗಾರಿಕಾ ನಗರಗಳಲ್ಲಿ ಪೆಟ್ರೋಲಿಯಮ್‍ನ ವಿವಿಧ ಉತ್ಪನ್ನಗಳು, ಅಲ್ಯುಮಿನಿಯಮ್ ವಸ್ತುಗಳು, ರಸಾಯನಿಕ, ಕೋಕ್, ವಿವಿಧ ಬಣ್ಣಗಳು, ಉಕ್ಕಿನ ವಸ್ತುಗಳು ತಯಾರಾಗುತ್ತವೆ.  

	ವೆನಿಸ್‍ನ ಮೂಲನಿವಾಸಿಗಳು, ಉತ್ತರ ಯುರೋಪಿನಿಂದ ಬಂದ ಅನಾಗರಿಕರ ದಾಳಿಯನ್ನು ತಪ್ಪಿಸಿಕೊಂಡು ಸು.400ರಲ್ಲಿ ಹತ್ತಿರದ ದ್ವೀಪಗಳಿಗೆ ವಲಸೆಹೋದರೆನ್ನುವರು. ಮುಂದೆ ಸು.800ರ ಹೊತ್ತಿಗೆ ವೆನಿಸ್ ಇಸ್ತಾಂಬುಲ್ ಮತ್ತು ಇಟಲಿಯ ಒಳ ಪ್ರದೇಶ ಮುಂತಾದ ಕಡೆ ವ್ಯಾಪಾರಾಭಿವೃದ್ಧಿಪಡಿಸಿಕೊಂಡು ಒಂದು ಸ್ವತಂತ್ರ ನಗರರಾಜ್ಯವೆನಿಸಿತು. 1202 ರಿಂದ 1204ರ ಧರ್ಮಯುದ್ಧದಲ್ಲಿ ವೆನಿಸ್ ಕಾನ್‍ಸ್ಟಾಂಟಿನೋಪಲ್ ನೊಡನೆ ಸೇರಿ ಬಿಜಾóನ್‍ಟೀಯನ್ ಸಾಮ್ರಾಜ್ಯವನ್ನು ಜಯಿಸಿತು. ವೆನಿಸ್ ಮತ್ತಷ್ಟು ಬಲಗೊಂಡು 1380ರಲ್ಲಿ ಜಿನೀವದ ಮೇಲೆ ಯುದ್ಧ ಸಾರಿ ಅದನ್ನು ಮಣಿಸಿತು. ಪೂರ್ವಮೆಡಿಟರೇನಿಯನ್ ಸಮುದ್ರದ ಮೇಲೆ ತನ್ನ ಹಿಡಿತವನ್ನು ಸಾಧಿಸಿ ವ್ಯಾಪಾರ ವಹಿವಾಟು ಹೆಚ್ಚಿಸಿಕೊಂಡಿತು. 1400ರ ಹೊತ್ತಿಗೆ ವೆನಿಸ್‍ನಗರ ರಾಜ್ಯದ ಆಳಿಕೆಯಡಿಯಲ್ಲಿ ಕ್ರೀಟ್, ಸೈಪ್ರಸ್, ಕ್ರೋಷಿಯದ ಡಾಲ್ಮೇಸಿಯನ್ ತೀರಪ್ರದೇಶ, ಈಶಾನ್ಯಭಾಗದ ಇಟಲಿ ಸೇರಿದವು. ವೆನಿಸ್ ಹಡಗುಗಳಲ್ಲಿ ರೇಷ್ಮೆ, ಸಾಂಬಾರ ಪದಾರ್ಥ ಮುಂತಾದ ಶ್ರೀಮಂತಿಕೆಯ ವಸ್ತುಗಳು ಸಾಗಾಣೆಯಾಗತೊಡಗಿದವು. ವೆನಿಸ್ ಕಲೆಯ ಪುನರುತ್ಥಾನದ ಕೇಂದ್ರವೆನಿಸಿತು (1400-1500). ಕ್ರಿಸ್ಟೋಫರ್ ಕೊಲಂಬಸ್ 1400ರ ಕೊನೆಯ ದಶಕಗಳಲ್ಲಿ ಅಮೆರಿಕದ ಪ್ರಯಾಣದಿಂದ ಮತ್ತು ವಾಸ್ಕೊಡಗಾಮ ಭಾರತಕ್ಕೆ ಮಾರ್ಗಕಂಡು ಹಿಡಿದ ಮೇಲೆ ಯುರೋಪಿನ ವ್ಯಾಪಾರ ಕೇಂದ್ರ ಅಟ್ಲಾಂಟಿಕ್ ಸಾಗರಕ್ಕೆ ಬದಲಾಯಿತು. ವೆನಿಸ್ ನಗರ ರಾಜ್ಯಕ್ಕೆ ಸೇರಿದ್ದ ಪ್ರದೇಶಗಳು ತುರ್ಕರ ವಶವಾದವು. 1797ರಲ್ಲಿ ನೆಪೋಲಿಯನ್ ವೆನಿಸ್ ನಗರವನ್ನು ಗೆದ್ದು ಇದನ್ನು ಆಸ್ಟ್ರಿಯದೊಡನೆ ಹಂಚಿಕೊಂಡ. ಆಗ ವೆನಿಸ್ ಆಸ್ಟ್ರಿಯದ ಆಡಳಿತಕ್ಕೆ ಸೇರಿತು. 1866ರಲ್ಲಿ ಇದು ಸ್ವತಂತ್ರ ದೇಶ ಇಟಲಿಯ ಭಾಗವಾಯಿತು. ಎರಡನೆಯ ಮಹಾಯುದ್ಧದಲ್ಲಿ ಜರ್ಮನಿಯ ಸೈನ್ಯ ವೆನಿಸ್ ನಗರವನ್ನಾಕ್ರಮಿಸಿತು. ಆಗ ಮಿತ್ರ ರಾಷ್ಟ್ರಗಳು ವೆನಿಸ್ ನಗರದ ಮೇಲೆ ದಾಳಿ ಮಾಡದೆ ಹಾಗೆಯೇ ಉಳಿಸಿದವು. 1966ರಲ್ಲಿ ದೊಡ್ಡ ಪ್ರವಾಹದ ದೆಸೆಯಿಂದ ವೆನಿಸ್ ನಗರಕ್ಕೆ ಹಾನಿಯುಂಟಾಯಿತು. ಸರ್ಕಾರ ಮತ್ತು ಜಗತ್ತಿನ ಕಲಾಪ್ರೇಮಿಗಳು ಈ ನಗರದ ರಕ್ಷಣೆ ಹಾಗೂ ಪುನರುಜ್ಜೀವನಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ.								
				*
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ